ಬೀದಿನಾಟಕ
ರಂಗಭೂಮಿಯ ಚಳವಳಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರ್ನಾಟಕದಲ್ಲಿ ಹುಟ್ಟಿಕೊಂಡ ಹೊಸಬಗೆಯ ನಾಟಕ ಪ್ರಕಾರ. ಇದು ಸಾಂಪ್ರದಾಯಿಕ ರಂಗಭೂಮಿಗಿಂತ ಅನೇಕ ದೃಷ್ಟಿಯಲ್ಲಿ ಭಿನ್ನವಾದುದು. ಇದಕ್ಕೆ ನಿರ್ದಿಷ್ಟವಾದ ರಂಗಭೂಮಿಯ ಪರಿಕರಗಳ ಆವಶ್ಯಕತೆಯಿಲ್ಲ. ಎಲ್ಲೆಂದರಲ್ಲಿ ರಸ್ತೆಯ ಬದಿ, ನಾಲ್ಕು ದಾರಿ ಸೇರುವ ಚೌಕದಲ್ಲಿ, ಸಂತೆನೆರೆಯುವಲ್ಲಿ, ಜನಜಂಗುಳಿ ಇರುವಲ್ಲಿ ಆಡುವಂಥದ್ದು. ರಂಗ ಮಂದಿರದ ಭವ್ಯೋಪೇತ ಕೃತಕ ಪರಿಸರವನ್ನು ಕಿತ್ತೊಗೆದು ಜನರ ನಡುವೆ ಬೀದಿ ಗಿಳಿದುದರಿಂದ ಇದು ಬೀದಿ ನಾಟಕವೆನಿಸಿತು. ಜನರಲ್ಲಿ ಜಾಗೃತಿ ಉಂಟುಮಾಡುವುದು; ಅವರು ವಿಚಾರ ಪರರಾಗುವಂತೆ ಪ್ರೇರೇಪಿಸುವುದು; ಜಾತಿ, ಮೂಢನಂಬಿಕೆ, ದೇವರು, ಸಂಪ್ರದಾಯ ಇತ್ಯಾದಿ ಜೀವ ವಿರೋಧಿ ಶಕ್ತಿಗಳನ್ನು ಪ್ರತಿಭಟಿಸಿ ಶುದ್ಧ ಮಾನವೀಯವಾಗಿ ಯೋಚಿಸುವಂತೆ ಮಾಡುವುದು; ಶೋಷಣೆ, ಅನ್ಯಾಯ, ಅತ್ಯಾಚಾರಗಳ ವಿರುದ್ಧ ಬಂಡಾಯ ಹೂಡುವಂತೆ ಪ್ರೇರೇಪಿಸುವುದು-ಇವೇ ಮುಂತಾದವು ಬೀದಿನಾಟಕಗಳ ಮೂಲೋದ್ದೇಶವೆನ್ನಬಹುದು. ಇಲ್ಲಿ ಕಲೆಗಿಂತ ವೈಚಾರಿಕತೆ, ಸಾಂಕೇತಿಕತೆಗಿಂತ ವಾಸ್ತವಿಕತೆ ಮುಖ್ಯ. ಇದೊಂದು ಬಗೆಯ ಬದ್ಧ ಸಾಹಿತ್ಯ. ಜನ ಸಾಮಾನ್ಯರ ಸ್ಥಿತಿಗತಿಗಳು, ಅವರ ನೋವುಯಾತನೆಗಳೇ ಇಲ್ಲಿಯ ನಾಟಕಗಳ ವಸ್ತು. ವರ್ತಮಾನದಲ್ಲಿ ಘಟಿಸಿದ, ಘಟಿಸುತ್ತಿರುವ ಪ್ರಕರಣಗಳೂ ಇಲ್ಲಿ ನಾಟಕವಾಗಬಹುದು. ಕಲ್ಪನೆಗೆ ಇಲ್ಲಿ ಕೊಂಚವೂ ಅವಕಾಶವಿಲ್ಲ; ಅದರ ಬೇರುಗಳಿರುವುದು, ಜೀವಂತಿಕೆಯಿರುವುದು ಹಸಿಹಸಿ ವಾಸ್ತವದಲ್ಲಿ. ಈ ನಾಟಕಗಳಲ್ಲಿ ಹಾಡು, ಸಂಗೀತ, ನೃತ್ಯಾಭಿನಯಗಳಿದ್ದರೂ ಅವುಗಳ ಮುಖ್ಯ ಉದ್ದೇಶ ಮನರಂಜನೆಗಿಂತ ಆ ಮೂಲಕ ವಿಚಾರವನ್ನು ತಲುಪಿಸುವುದೇ ಆಗಿದೆ.

	ಕನ್ನಡದಲ್ಲಿ ಅನೇಕ ಲೇಖಿಕೆಯರು ಈ ಪ್ರಕಾರದಲ್ಲಿ ಗಟ್ಟಿ ಕೆಲಸ ಮಾಡಿದ್ದಾರೆ. ಅನೇಕ ಕಲಾ ತಂಡಗಳು ಇವರ ಕ್ರಾಂತಿಕಾರಕ ಸಂದೇಶಗಳನ್ನು ಜನಸಾಮಾನ್ಯನ ಹತ್ತಿರಕ್ಕೆ ಒಯ್ದಿವೆ. ವಿಜಯಾ, ಎ.ಎಸ್.ಮೂರ್ತಿ ಮುಂತಾದವರು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಬಂದರೋ ಬಂದರು, ಕೇಳ್ರಪ್ಪೋ ಕೇಳ್ರೀ, ಮುಖವಿಲ್ಲದವರು, ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ, ಉಳ್ಳವರ ನೆರಳು, ಬೆಲ್ಜಿ, ಹಂಚಿಕಾ ಪ್ರಕರಣ, ಧನ್ವಂತರಿಯ ಚಿಕಿತ್ಸೆ, ಮಾನಿಷಾದ ಮೊದಲಾದ ನಾಟಕಗಳು ಬಹುಜನರನ್ನು ಆಕರ್ಷಿಸಿವೆ. ವಿಜಯಾ ಅವರ ಬಂದರೋ ಬಂದರು ಎಂಬ ನಾಟಕ ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿರುವುದಷ್ಟೇ ಅಲ್ಲದೆ 1980ರ ಅತ್ಯುತ್ತಮ ನಾಟಕವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದಿದೆ. ಇದೇ ನಾಟಕ ತಮಿಳು, ಸಂಸ್ಕøತ, ಹಿಂದಿ ಭಾಷೆಗಳಿಗೆ ಕೂಡ ಅನುವಾದವಾಗಿದ್ದು ಅಲ್ಲಿಯೂ ಅಪಾರ ಹೆಸರು ಮಾಡಿದೆ. ಚಿತ್ರಾಗೆಳೆಯರ ತಂಡ 1970ರಿಂದಲೂ ಬೀದಿ ನಾಟಕಗಳನ್ನು ಆಡುತ್ತ ಬಂದಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಮುದಾಯ ಮುಂತಾದ ಹವ್ಯಾಸಿ ತಂಡಗಳು ಈ ನಿಟ್ಟಿನಲ್ಲಿ ಗಮನಾರ್ಹವಾದ ಕೆಲಸ ಮಾಡಿವೆ. 										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ